ನಿಕ್ಸನ್, ರಿಚರ್ಡ್ ಮಿಲ್‍ಹೌಸ್ -
	ಅಮೆರಿಕ ಸಂಯುಕ್ತ ಸಂಸ್ಥಾನದ ನ್ಯಾಯವಾದಿ. ರಿಪಬ್ಲಿಕನ್ ಪಕ್ಷದ ರಾಜಕಾರಣಿ. ಆ ದೇಶದ 37ನೆಯ ಅಧ್ಯಕ್ಷ. 1913ರ ಜನವರಿ 9ರಂದು ಕ್ಯಾಲಿಫೋರ್ನಿಯದ ಯೋರ್ಬ ಲಿಂಡ ಎಂಬ ಸ್ಥಳದಲ್ಲಿ ಜನಿಸಿದರು. ಫ್ರಾನ್ಸಿಸ್ ಆಂಟೋನಿ ಮತ್ತು ಹ್ಯಾನ ಮಿಲ್‍ಹೌಸ್ ನಿಕ್ಸನ್ ದಂಪತಿಗಳ ಐವರು ಗಂಡುಮಕ್ಕಳಲ್ಲಿ ಇವರು ಎರಡನೆಯವರು. 1922ರಲ್ಲಿ ಇವರ ಸಂಸಾರ ವಿಟಿಯರ್‍ಗೆ ಹೋಯಿತು; ನಿಕ್ಸನರು 1934ರಲ್ಲಿ ವಿಟಿಯರ್ ಕಾಲೇಜಿನ ಪದವೀಧರರಾದರು. ಅನಂತರ ಇವರು ವಿದ್ಯಾರ್ಥಿ ವೇತನ ಪಡೆದು ಡ್ಯೂಕ್ ವಿಶ್ವವಿದ್ಯಾಲಯ ಸೇರಿ 1937ರಲ್ಲಿ ನ್ಯಾಯಪರೀಕ್ಷೆಯಲ್ಲಿ ಉತ್ತೀರ್ಣರಾದರು. ವಿಟಿಯರ್‍ನಲ್ಲಿ ವಕಾಲತ್ತು ಪ್ರಾರಂಭಿಸಿದರು. 1942ರಲ್ಲಿ ಸ್ವಲ್ಪಕಾಲ ಯುದ್ಧ ಕಾಲದ ಕಛೇರಿಯೊಂದರಲ್ಲಿ ಕೆಲಸ ಮಾಡಿದರು. 1942ರ ಆಗಸ್ಟಿನಲ್ಲಿ ನೌಕಾ ವಿಭಾಗವನ್ನು ಸೇರಿಕೊಂಡು 1946ರಲ್ಲಿ ಆದ್ದರಿಂದ ಬಿಡುಗಡೆ ಹೊಂದುವ ವೇಳೆಗೆ ಲೆಫ್ಟೆನೆಂಟ್ ಕಮ್ಯಾಂಡರ್ ಆಗಿದ್ದರು. ರಾಜಕಾರಣದಲ್ಲಿ ದುಮುಕಿ 1946 ಮತ್ತು 1948ರಲ್ಲಿ ಕ್ಯಾಲಿಫೋರ್ನಿಯದಿಂದ ರಿಪಬ್ಲಿಕನ್ ಪಕ್ಷದ ಪರವಾಗಿ ಪ್ರತಿನಿಧಿ ಸಭೆಗೆ ಚುನಾಯಿತರಾದರು. 1947ರಲ್ಲಿ ಯೂರೋಪಿನ ದೇಶಗಳ ಆರ್ಥಿಕ ಆವಶ್ಯಕತೆಗಳನ್ನು ಕುರಿತು ಅಧ್ಯಯನ ಮಾಡಲು ಯೂರೋಪಿನ ಪ್ರವಾಸ ಕೈಗೊಂಡರು. ಅಮೆರಿಕಕ್ಕೆ ಸಲ್ಲದ (ಅನ್-ಅಮೆರಿಕನ್) ಚಟುವಟಿಕೆಗಳನ್ನು ವಿಚಾರಿಸುವ ಸಮಿತಿಯ ಸದಸ್ಯರಾಗಿದ್ದರು. ಆಲ್ಜರ್‍ಹೆಸ್ ಎಂಬಾತನ ಮೇಲೆ ಹೊರಿಸಲಾಗಿದ್ದ ಆಪಾದನೆ ಸಾಬೀತಾಗಿ ಅವನು ಶಿಕ್ಷೆಗೆ ಗುರಿಯಾಗಲು ಇವರು ಬಹುಮಟ್ಟಿಗೆ ಕಾರಣರು. 1950ರಲ್ಲಿ ಇವರು ಸೆನೆಟ್ ಸದಸ್ಯರಾದರು. 1952 ಮತ್ತು 1956ರ ಚುನಾವಣೆಗಳಲ್ಲಿ ಅಧ್ಯಕ್ಷ್ಯ ಐಸೆನ್‍ಹೌವರರಿಗೆ ದ್ವಿತೀಯರಾಗಿ ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾದರು. ಐಸೆನ್‍ಹೌವರರು ಅಸ್ವಸ್ಥರಾಗಿದ್ದಾಗ ಮಂತ್ರಿಮಂಡಲದ ಸಭೆಗಳಲ್ಲಿ ಅವರ ಸ್ಥಾನದಲ್ಲಿ ಕಾರ್ಯನಿರ್ವಹಿಸಿದರು. 1953ರ ಕೊನೆಯಲ್ಲಿ ಅಧ್ಯಕ್ಷರ ಪರವಾಗಿ ಏಷ್ಯ ಮತ್ತು ಪಶ್ಚಿಮ ಏಷ್ಯ ಪ್ರದೇಶದಲ್ಲಿ ಹತ್ತು ವಾರಗಳ ಸಂಚಾರ ಕೈಗೊಂಡರು.

	1960ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿಕ್ಸನ್ ಸ್ಪರ್ಧಿಯಾಗಿದ್ದರು. ಡೆಮೊಕ್ರಾಟ್ ಅಭ್ಯರ್ಥಿ ಜಾನ್ ಕೆನಡಿಗೆ ವಿಜಯ ಪ್ರಾಪ್ತಿಯಾಯಿತು. ನಿಕ್ಸನರು ಕ್ಯಾಲಿಫೋರ್ನಿಯಕ್ಕೆ ವಾಪಸಾಗಿ ಎರಡು ವರ್ಷಗಳ ಅನಂತರ ಆ ರಾಜ್ಯದ ಗವರ್ನರ್ ಪದವಿಗೆ ಸ್ಪರ್ಧಿಸಿದರು. ಆಗಲೂ ಇವರಿಗೆ ಸೋಲಾಯಿತು. ಆಗ ನಿಕ್ಸನರು ನ್ಯೂಯಾರ್ಕ್ ನಗರದಲ್ಲಿ ಒಂದು ಸಂಸ್ಥೆಯ ಪಾಲುದಾರರಾಗಿ ಸೇರಿ ವಕಾಲತ್ತು ನಡೆಸಿದರು. ಆಗ ಇವರ ವರಮಾನ ಚೆನ್ನಾಗಿತ್ತು. 1964 ಮತ್ತು 1966ರ ಚುನಾವಣೆಗಳಲ್ಲಿ ತಮ್ಮ ಪಕ್ಷದ ಉಮೇದುವಾರರಿಗೆ ಪ್ರಚಾರನಿರತರಾದ ನಿಕ್ಸನರಿಗೆ 1968ರಲ್ಲಿ ಮತ್ತೆ ಅಧ್ಯಕ್ಷ ಪದವಿಗೆ ಸ್ಪರ್ಧಿಸುವ ಅವಕಾಶ ದೊರಕಿತು. ಡೆಮೊಕ್ರಾಟ್ ಅಭ್ಯರ್ಥಿ ಹ್ಯೂಬರ್ಟ್ ಎಚ್. ಹಂಫ್ರಿಯನ್ನು ಸೋಲಿಸಿ ಅಲ್ಪ ಬಹುಮತದಿಂದ ಇವರು ಅಧ್ಯಕ್ಷರಾಗಿ ಆಯ್ಕೆಗೊಂಡರು. 1972ರಲ್ಲಿ ಮತ್ತೆ ಸ್ಪರ್ಧಿಸಿದಾಗ ಭಾರಿ ಬಹುಮತದಿಂದ ಆರಿಸಿಬಂದರು.

	ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ನಿಕ್ಸನರ ಆಡಳಿತ ಗಮನಾರ್ಹವಾದ ಕಾರ್ಯಗಳನ್ನು ಸಾಧಿಸಿತು. ಚೀನದೊಡನೆ ವೈಮನಸ್ಯವನ್ನು ಅಂತ್ಯಗೊಳಿಸಲು ಮತ್ತು ಸೋವಿಯತ್ ದೇಶದೊಂದಿಗೆ ಯುದ್ಧಾಸ್ತ್ರ ನಿಯಂತ್ರಣಗೊಳಿಸಲು ಒಪ್ಪಂದಕ್ಕೆ ಬರಲು ಸಾಧ್ಯವಾಯಿತು. ಚೀನ ಮತ್ತು ಸೋವಿಯತ್ ದೇಶಗಳಿಗೆ ಭೇಟಿಯಿತ್ತ ಮೊದಲನೆಯ ಅಮೆರಿಕನ್ ಅಧ್ಯಕ್ಷರು ನಿಕ್ಸನ್. ವಿಯೆಟ್‍ನಾಮಿನಲ್ಲಿ ಇವರು ಯುದ್ಧ ಸಮಾಪ್ತಿಗೊಳಿಸಿ ಅಲ್ಲಿಂದ ಅಮೆರಿಕದ ಸೈನಿಕರನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯವಾಯಿತು.

	ಇವರ ಅಧ್ಯಕ್ಷತೆಯ ಅವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಅನೇಕ ಆರ್ಥಿಕ ಕಷ್ಟಗಳನ್ನು ಎದುರಿಸಬೇಕಾಯಿತು. ವ್ಯಾಪಾರದ ಇಳಿತ ಮತ್ತು ಹಣದುಬ್ಬರ ಸಂಭವಿಸಿದವು. ನಿಕ್ಸನರು ದೇಶದಲ್ಲಿ ವೇತನ ಮತ್ತು ಬೆಲೆಗಳನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕಾಯಿತು. ಇವರ ಅಧಿಕಾರದ ಅವಧಿಯಲ್ಲಿ ಡಾಲರ್ ಎರಡು ಸಲ ಅಪಮೌಲ್ಯಕ್ಕೀಡಾಯಿತು.

	ನಿಕ್ಸನರ ಆಡಳಿತಕ್ಕೆ ತುಂಬ ಕಳಂಕ ಬಂದದ್ದು ವಾಟರ್‍ಗೇಟ್ ಪ್ರಕರಣದಿಂದಾಗಿ. ವಾಷಿಂಗ್‍ಟನ್ನಿನಲ್ಲಿ ವಾಟರ್‍ಗೇಟ್ ಕಟ್ಟಡದಲ್ಲಿರುವ ಡೆಮೊಕ್ರಾಟಿಕ್ ಪಕ್ಷದ ಪ್ರಧಾನ ಕಛೇರಿಗೆ 1972ರ ಜೂನ್ 17ರಂದು ಕನ್ನ ಹಾಕಲು ಯತ್ನಿಸಿದರೆಂಬ ಸಂಶಯದ ಮೇಲೆ ಪೋಲೀಸರು ಐವರನ್ನು ಬಂಧಿಸಿದರು. ಕಾನೂನು ವಿರೋಧಿ ಬೇಹುಗಾರಿಕೆಯ ಉದ್ದೇಶದ ಈ ದರೋಡೆಯ ಪ್ರಯತ್ನಕ್ಕೂ ಅಧ್ಯಕ್ಷರ ಶ್ವೇತಭವನಕ್ಕೂ ಸಂಬಂಧವಿತ್ತೆಂಬ ಅಂಶ ಬೆಳಕಿಗೆ ಬಂತು. ವಂಚನೆಯ ಅಪರಾಧಕ್ಕಾಗಿ ತನಿಖೆಗೆ ಗುರಿಯಾಗಿದ್ದ ಒಬ್ಬ ಬಂಡವಳಗಾರನಿಂದ ನಿಕ್ಸನರು ಚುನಾವಣಾ ಪ್ರಚಾರಕ್ಕಾಗಿ 2,00,000 ಡಾಲರುಗಳ ವಂತಿಗೆ ಪಡೆದ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡಿದ ಮತ್ತು ನ್ಯಾಯಕ್ಕೆ ಅಡಚಣೆಯೊಡ್ಡಲು ಯತ್ನಿಸಿದ ಆಪಾದನೆಗಳ ಮೇಲೆ ಮಂತ್ರಿ ಮಂಡಲದ ಮಾಜಿ ಸದಸ್ಯರಾದ ಅಟಾರ್ನಿ ಜನರಲ್ ಜಾನ್ ಮಿಚೆಲ್ ಮತ್ತು ವಾಣಿಜ್ಯ ಕಾರ್ಯದರ್ಶಿ ಮಾರಿಸ್ ಎನ್. ಸ್ಟಾನ್ಸರ ಮೇಲೆ ಮೊಕದ್ದಮೆ ಹೂಡಲಾಯಿತು. ಈ ಪ್ರಕರಣಗಳ ತನಿಖೆ ಮತ್ತು ವಿಚಾರಣೆಯ ಕಾಲದಲ್ಲಿ ಬೆದರಿಕೆ, ಪ್ರಲೋಭನ, ಬಲಪ್ರಯೋಗ, ದಾಖಲೆಗಳ ಚೌರ್ಯ, ವಿರೋಧಿಗಳ ಚಾರಿತ್ರ್ಯ ಭಂಜನ, ಪುರಾವೆ ಮುಚ್ಚಿಡುವ ಯತ್ನ, ಕೃತಕ ಪುರಾವೆಯ ಸೃಷ್ಟಿ, ಆಸ್ತಿಗಳ ಅಕ್ರಮ ವ್ಯವಹಾರ, ಲಂಚಗುಳಿತನ, ನ್ಯಾಯಾಲಯದ ವಂಚನೆ, ಮೌನದಿಂದ ಜೈಲಿಗೆ ಹೋಗುವಂತೆ ಆಪಾದಿತರಿಗೆ ಹಣ ತೆರುವುದು, ನಂಬಿಕೆದ್ರೋಹ ಮೊದಲಾದ ಆಪಾದನೆಗಳಿಗೆ ನಿಕ್ಸನ್ ಆಡಳಿತದ ಅಧಿಕಾರಿಗಳು ಗುರಿಯಾದರು. ಕಾನೊಲಿ, ಎಹರ್ಲಿಚ್‍ಮನ್, ಮಿಚೆಲ್, ಡೀನ್, ಹಾಲ್ಡೆಮನ್, ಹಂಟರ್ ಮೊದಲಾದ, ನಿಕ್ಸನ್ನರೊಡನೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧವಿದ್ದ, ಸುಮಾರು 22 ಜನರಿಗೆ ಕಾರಾಗೃಹ ಶಿಕ್ಷೆಯಾಯಿತು. ಇದರಲ್ಲಿ ತಮ್ಮದೇನೂ ಪಾತ್ರವಿರಲಿಲ್ಲವೆಂದು ನಿಕ್ಸನ್ ಸಾಧಿಸಿದರು. ಆದರೆ ಇವರು ಜನತೆ, ಪತ್ರಿಕೆಗಳು, ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗದ ಪ್ರತಿಭಟನೆಗೆ ಒಳಗಾದರು. ಮಹಾಭಿಯೋಗದ ಹೆದರಿಕೆಯೂ ಇತ್ತು. 1974ರ ಆಗಸ್ಟ್ 9ರಂದು ನಿಕ್ಸನರು ಅಧ್ಯಕ್ಷ ಪದವಿಗೆ ರಾಜೀನಾಮೆಯಿತ್ತರು. ಇವರ ಸ್ಥಾನದಲ್ಲಿ ಅಧ್ಯಕ್ಷರಾದ ಫೋರ್ಡರು ನಿಕ್ಸನರಿಗೆ ಕ್ಷಮಾದಾನ ನೀಡಿದರು. ಈ ಕ್ರಮ ಎಷ್ಟರಮಟ್ಟಿಗೆ ಉಚಿತವಾದ್ದು ಎಂಬ ವಿಚಾರವಾಗಿ ಆ ದೇಶದಲ್ಲಿ ವಿಪುಲವಾಗಿ ವಾದಪ್ರತಿವಾದಗಳು ನಡೆದುವು.

	ಗುರಿ ಸಾಧಿಸಲು ಯಾವ ದಾರಿಯಾದರೂ ಸರಿ ಎಂಬುದು ನಿಕ್ಸನರ ಮನೋಭಾವವಾಗಿತ್ತೆಂದು ಹೇಳಲಾಗಿದೆ. ಕೇವಲ ಸ್ವಾರ್ಥಚಿಂತನೆಯಿರುವ, ಮಹಾತ್ವಾಕಾಂಕ್ಷಿಯಾದ ವ್ಯಕ್ತಿಗೆ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಆತ ಎಂಥ ಕಾರ್ಯ ಸಾಧಿಸಬಹುದು, ಅಲ್ಲದೆ ಯಾವ ಮಟ್ಟಕ್ಕೆ ಇಳಿಯಬಹುದು ಎನ್ನುವುದಕ್ಕೆ ನಿಕ್ಸನ್ ಒಂದು ಉದಾಹರಣೆಯೆನ್ನಲಾಗಿದೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ